ಆಕಾಶ 3

	ಆಕಾಶಕಾಯಗಳು ವ್ಯಾಪಿಸಿರುವ ಮತ್ತು ಅವುಗಳನ್ನು ಒಳಗೊಂಡಿರುವ ಸಮಗ್ರ ಪ್ರದೇಶದ ಹೆಸರು ವಿಶ್ವ (ಯೂನಿವರ್ಸ್). ಈ ವಿಶ್ವದಿಂದ ಸಕಲ ಕಾರ್ಯಗಳನ್ನೂ ತೆಗೆದರೆ ದೊರೆಯುವ ಪ್ರದೇಶ ವಿಶಾಲಾರ್ಥದಲ್ಲಿ ಆಕಾಶ (ಸ್ಪೇಸ್); ಅಂತರಿಕ್ಷ ಎಂದೂ ಕರೆಯುವುದುಂಟು. ಆದ್ದರಿಂದ ಆಕಾಶವೆಂದರೆ ಶೂನ್ಯಪ್ರದೇಶ (ಬಯಲು) ಎಂದು ಅರ್ಥವಾಗುತ್ತದೆ. ಭೌತಿಕ ಆಕಾಶ (ಫಿಸಿಕಲ್ ಸ್ಪೇಸ್) ಎಂಬ ರೂಢಿಯಲ್ಲಿ ಬಳಕೆಯಲ್ಲಿರುವ ಪದ ಶೂನ್ಯಾಕಾಶದ ಒಂದು ಅಂಶವನ್ನು ಸೂಚಿಸುತ್ತದೆ_ ಎರಡು ಬಿಂದುಗಳ ನಡುವಿನ ಆಕಾಶ. ಒಂದು ಸಮತಲದ ಮೇಲಿನ ಆಕಾಶ, ಒಂದು ಕೋಣೆಯೊಳಗಿನ ಆಕಾಶ ಇವು ಉದಾಹರಣೆಗಳು. ಇಂಥ ಪ್ರಯೋಗಗಳಲ್ಲಿ ಆಕಾಶ ಪದಕ್ಕೆ ಒಂದು ಸ್ಪಷ್ಟ ಗಣಿತೀಯ ವ್ಯಾಖ್ಯೆ ಇದೆ: ಮೊದಲನೆಯದು ಸರಳರೇಖೆ ಅಥವಾ ಒಂದು ಪರಿಮಾಣದ (ಡೈಮೆನ್‍ಷನಲ್) ಆಕಾಶ. ಎರಡನೆಯದು ಕ್ಷೇತ್ರಫಲ ಅಥವಾ ಎರಡು ಪರಿಮಾಣಗಳ ಆಕಾಶ. ಮೂರನೆಯದು ಘನಗಾತ್ರ ಅಥವಾ ಮೂರು ಪರಿಮಾಣಗಳ ಆಕಾಶ. ಗಣಿತೀಯ ವ್ಯಾಖ್ಯೆಯ ಪರಿಮಿತಿಯೊಳಗೆ ಆಕಾಶ ಪದದ ವ್ಯಾಪ್ತಿ ಇದೆ.  ಮೊತ್ತ ಮೊದಲು ಗಣಿತೀಯ ಆಕಾಶದ ಅಭ್ಯಾಸ ಪ್ರಾರಂಭವಾದದ್ದು ಯೂಕ್ಲಿಡ್ಡನ ಜ್ಯಾಮಿತಿಯಲ್ಲಿ. ಉದ್ದ, ಕ್ಷೇತ್ರಫಲ ಮತ್ತು ಘನಗಾತ್ರ ಭೌತಿಕ ಅನುಭವಗಳು; ಅವುಗಳ ಭಾವನಾರೂಪ ಜ್ಯಾಮಿತಿಯಾಗಿ ಬೆಳೆಯಿತು. ಉದಾಹರಣೆಗೆ, ಪೈಥಾಗೊರಸ್‍ನ ಪ್ರಮೇಯಕ್ಕೆ ಒಂದು ಭೌತಿಕ ಅನುಭವವನ್ನೂ ಒಂದು ಬಾವಿಯನ್ನು ತೋಡುವಾಗ ಅಥವಾ ಒಂದು ಗದ್ದೆಯ ವಿಸ್ತೀರ್ಣ ಅಳೆಯುವಾಗ ಲಭಿಸುವ ಅನುಭವಕ್ಕೆ ಒಂದು ಜ್ಯಾಮಿತಿ ಪ್ರಮೇಯವನ್ನೂ ಹೊಂದಿಸಬಹುದು. ಈ ಕಾರಣದಿಂದ ಜ್ಯಾಮಿತಿಯನ್ನು ಆಕಾಶ ವಿಜ್ಞಾನ (ಸ್ಪೇಸ್ ಸೈನ್ಸ್) ಎಂದು ಕರೆದದ್ದೂ ಇದೆ. 19ನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಅಯೂಕ್ಲಿಡ್ (ನಾನ್‍ಯೂಕ್ಲಿಡಿಯನ್) ಜ್ಯಾಮಿತಿ ಹಿಂದಿನ ರೂಢಮೂಲ ಭಾವನೆಗಳನ್ನು ಪ್ರಶ್ನಿಸಿತು. ಜ್ಯಾಮಿತಿಗೂ ಭೌತ ಪ್ರಪಂಚಕ್ಕೂ ಹೊಂದಾಣಿಕೆ ಇರಬೇಕಾಗಿಲ್ಲ. ಜ್ಯಾಮಿತಿಯನ್ನು ಒಂದು ಅಮೂರ್ತ ಭಾವನೆಯಾಗಿ ಬೆಳೆಸುವುದು ಸಾಧ್ಯವೆಂದು ತಿಳಿಯಿತು. ಜ್ಯಾಮಿತಿಗೆ ಬೀಜಗಣಿತದ ಅನ್ವಯದಿಂದ ಭಾವನೆಗಳನ್ನು ಗಣಿತೋಕ್ತಿಗಳಾಗಿ ಪರಿವರ್ತಿಸಿ ಅವುಗಳಲ್ಲಿ ವಿವಿಧ ಪರಿಕರ್ಮಗಳನ್ನೆಸಗಿ ಮುಂದುವರಿಯುವುದು ಸಾಧ್ಯವಾಯಿತು. 3 ಪರಿಮಾಣಗಳ ಆಕಾಶದಿಂದ 4, 5 ಹೀಗೆಯೇ n ಪರಿಮಾಣಗಳು ಆಕಾಶದ ಗುಣಗಳ ಅಭ್ಯಾಸ ಸುಲಭವಾಯಿತು. (ನೋಡಿ- ಅತ್ಯಾಕಾಶಗಳು) ಇದರಿಂದ ರೂಪಗೊಂಡದ್ದು ಸದಿಶಾಕಾಶ (ವೆಕ್ಟರ್‍ಸ್ಪೇಸ್) ಎಂಬ ಭಾವನೆ. ಸದಿಶಗಳು ಸೂಚಿಸುವ ಬಿಂದುಗಳಿರುವುದು ಸದಿಶಾಕಾಶದಲ್ಲಿ.

ಆಕಾಶಭಾವನೆಯ ಅಮೂರ್ತ ಬೆಳೆವಣಿಗೆಯಲ್ಲಿ ಗಣಿತ ಸಿದ್ಧಾಂತದ ಅಂಗ ಪ್ರಧಾನವಾಗಿದೆ. ವಿಶಾಲಾರ್ಥದಲ್ಲಿ ಕೆಲವು ಸ್ವತಸ್ಸಿದ್ಧಗಳ ಮೇಲೆ ಅವಲಂಬಿಸಿರುವ ಗಣಾಂಶಗಳ (ಎಲಿಮೆಂಟ್ಸ್) ಗಣ (ಸೆಟ್) ಆಕಾಶ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ